ಮೊದಲಾರ್ಧ ‘ಗ್ರಾಮಾಯಣ’.. ದ್ವಿತೀಯಾರ್ಧ ‘ರಾಜಕಾರಣ’ ಯಾವುದು ಬೇಡ?

ಮಣ್ಣಿನ ಘಮವಿರುವ ಚಿತ್ರಗಳು ಆ ಪರಿಮಳವನ್ನು ಸೂಸುವುದರತ್ತ ಗಮನಹರಿಸದೆ ಹಳಿ ತಪ್ಪಿದರೆ ಸಿನಿಮಾದ ಮೂಲ ಉದ್ದೇಶವೇ ಮರೆಯಾಗುತ್ತದೆ. ಹಳ್ಳಿಯ ಸೊಗಡಿನ ‘ಗ್ರಾಮಾಯಣ’ವು ಮೊದಲಾರ್ಧದಲ್ಲಿ ಭರವಸೆಯನ್ನು ಮೂಡಿಸಿ, ದ್ವಿತೀಯಾರ್ಧದಲ್ಲಿ ರಾಜಕೀಯ ಭಾಷಣದಂತೆ ಭಾಸವಾಗುತ್ತದೆ.

ಸೀನ ಎಂದೇ ಕರೆಯಲ್ಪಡುವ ಶ್ರೀನಿವಾಸ(ವಿನಯ್‌ ರಾಜ್‌ಕುಮಾರ್‌) ದೇವಪುರ ಎಂಬ ಊರಿನಲ್ಲಿದ್ದುಕೊಂಡೇ ಜೀವನ ನಡೆಸುವ ಕನಸು ಕಟ್ಟಿಕೊಂಡಾತ. ಬಹು ಮುಂಗೋಪಿ. ಟ್ರ್ಯಾಕ್ಟರ್‌ ಖರೀದಿ ಈತನ ಕನಸು. ನಗರದ ಕಡೆ ಮುಖಮಾಡುವ ಯುವಕರಿಗೂ ಹಳ್ಳಿಯ ಜೀವನದ ಪಾಠ ಮಾಡುವಾತ. ಊರಿನ ಹುಡುಗಿ ‘ಕುಸುಮಾ’ಳೆಂದರೆ ಈತನಿಗೆ ಬಲು ಪ್ರೀತಿ. ಇವನ ಜೀವನದಲ್ಲಿ ಗ್ರಾಮ ಪಂಚಾಯತಿ ಸದಸ್ಯ ‘ಸದಾನಂದ ಸ್ವಾಮಿ’(ಗೋಪಾಲಕೃಷ್ಣ ದೇಶಪಾಂಡೆ) ಹಾಗೂ ‘ಕರಿ ಬೆಕ್ಕು’(ಯೋಗಿ) ಬಂದ ಬಳಿಕ ಆಗುವ ತಿರುವುಗಳೇ ಸಿನಿಮಾದ ಕಥೆ. 

ಮೊದಲಾರ್ಧದಲ್ಲಿ ಬೆಟ್ಟದಷ್ಟು ಭರವಸೆ ಮೂಡಿಸುವ ಕಥೆ, ಚಿತ್ರಕಥೆ, ಅದಕ್ಕೆ ತಕ್ಕುದಾದ ಛಾಯಾಚಿತ್ರಗ್ರಹಣ, ಹಾಡು ಸಿನಿಮಾದಲ್ಲಿದೆ. ಪಾತ್ರಗಳ ಪರಿಚಯವೂ ಆಳವಾಗಿದೆ. ಹಳ್ಳಿಯ ಬದುಕು, ಅದರ ಚಿತ್ರಣ, ಆ ಜಾತ್ರೆ, ಅದರೊಳಗಿನ ಪದ, ಹೆಜ್ಜೆ ಎಲ್ಲವೂ ಚೆಂದ. ಅಷ್ಟು ಸೂಕ್ಷ್ಮವಾಗಿ ನಿರ್ದೇಶಕರು ಈ ಭಾಗವನ್ನು ಕೆತ್ತಿದ್ದಾರೆ. ಸೀನ ಹಾಗೂ ಕುಸುಮಾಳ ಮುಗ್ಧವಾದ ಪ್ರೇಮಕ್ಕೂ ಒಂದು ಚೆಂದದ ಗ್ರಾಫ್‌ ನೀಡಿದ್ದಾರೆ. ಅಮ್ಮ–ಮಗನ ಬಾಂಧವ್ಯ, ಹಳ್ಳಿ ಸೊಗಡು ಭರಪೂರವಾಗಿದೆ.  

ಸಮಯ ಉರುಳಿದಂತೆ ಕಥೆ ಕೇವಲ ದ್ವೇಷ, ರಾಜಕೀಯ, ಹೊಡೆದಾಟಕ್ಕೆ ಹೊರಳುತ್ತದೆ. ಕಥೆಯ ಕೆಲವು ಭಾಗ ಅನಗತ್ಯ ಎಂದೆನಿಸುತ್ತದೆ. ಬರ, ಕೃಷಿಯಲ್ಲಿನ ಸಮಸ್ಯೆ, ಬದುಕಿನ ಬವಣೆಗಳನ್ನು ಕೆಲ ದೃಶ್ಯ ಹಾಗೂ ಸಂಭಾಷಣೆಗೆ ನಿರ್ದೇಶಕರು ಸೀಮಿತಗೊಳಿಸಿದ್ದಾರೆ. ನಾಯಕನ ಬದುಕನ್ನು ಇದರತ್ತ ತಿರುಗಿಸುವ ಅವಕಾಶವನ್ನು ಸೃಷ್ಟಿಸಬಹುದಿತ್ತು. ಇದು ಕಥೆಗೆ ಹೊಸ ಆಯಾಮವನ್ನೇ ನೀಡುವ ಸಾಧ್ಯತೆಯನ್ನು ಹೊಂದಿತ್ತು. ಬದಲಾಗಿ ದ್ವಿತೀಯಾರ್ಧದ ಕಥೆಯು ಹಳ್ಳಿ ರಾಜಕೀಯಕ್ಕೆ ಸೀಮಿತವಾಗಿದೆ. ಇದರಲ್ಲಿ ಮಾಹಿತಿ ಹಕ್ಕು ಕಾಯ್ದೆ, ಜಾತಿ ರಾಜಕೀಯ ಮುಂತಾದುವುಗಳನ್ನು ತರಲಾಗಿದೆ.  

ನಟನೆಯಲ್ಲಿ ವಿನಯ್‌ ರಾಜ್‌ಕುಮಾರ್‌ ‘ಸೀನ’ನಾಗಿ ಜೀವಿಸಿದ್ದಾರೆ. ಮುಗ್ಧತೆಯೂ, ಮುಂಗೋಪವೂ ತುಂಬಿದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೇಘ ಶೆಟ್ಟಿ ಮಾತಿನ ಹಾಗೂ ನೋಟದ ಬಾಣಗಳಲ್ಲೇ ಗುರಿ ಮುಟ್ಟಿದ್ದಾರೆ. ಅಪರ್ಣಾ ಅವರು ಸದಾ ಬೈಯುವ ಆದರೂ ಪ್ರೀತಿಸುವ ಅಮ್ಮನಾಗಿ ಮನಮುಟ್ಟುತ್ತಾರೆ. ಯೋಗಿ ಅವರು ನಿಭಾಯಿಸಿದ ‘ಕರಿ ಬೆಕ್ಕು’ ಹಾಗೂ ಅಚ್ಯುತ್‌ ಕುಮಾರ್‌ ಅವರ ವೈದ್ಯರ ಪಾತ್ರದ ಬರವಣಿಗೆ ಇನ್ನಷ್ಟು ಭಿನ್ನ, ಗಟ್ಟಿಯಾಗಿರಬೇಕಿತ್ತು. ಕ್ಲೈಮ್ಯಾಕ್ಸ್‌ ಹಂತದಲ್ಲಿ ‘ಕೊತ್ತಲವಾಡಿ’ ಸಿನಿಮಾದ ಪಾತ್ರದಂತೆಯೇ ಗೋಪಾಲಕೃಷ್ಣ ದೇಶಪಾಂಡೆ ಅವರ ಪಾತ್ರ ಕಾಣಿಸುತ್ತದೆ.‘ಸಿಕ್ಸ್ತ್‌ಸೆನ್ಸ್‌ ಸೀನ’ ಎಂದು ತನ್ನನ್ನು ತಾನೇ ಕರೆದುಕೊಳ್ಳುವ ನಾಯಕನಿಗೆ ನಡೆಯುವ ಘಟನೆಗಳೇಕೆ ಅರಿವೇ ಆಗುವುದಿಲ್ಲ ಎನ್ನುವುದಕ್ಕೆ ಉತ್ತರವಿಲ್ಲ! ಕ್ಲೈಮ್ಯಾಕ್ಸ್‌ನ ಕೊನೆಯ ದೃಶ್ಯಕ್ಕೂ ಅರ್ಥವಿಲ್ಲ.  

ಸಿನಿಮಾದುದ್ದಕ್ಕೂ ಸಂಭಾಷಣೆ ಸೊಗಸಾಗಿದೆ, ಹಲವೆಡೆ ತೀಕ್ಷ್ಣವೂ ಆಗಿದೆ. ಎರಡನೇ ಭಾಗದ ಸಣ್ಣ ಸುಳಿವನ್ನೂ ನಿರ್ದೇಶಕರು ನೀಡಿದ್ದಾರೆ. ‘ಏನೇ ಹೇಳು ಕುಸುಮ’ ಹಾಗೂ ‘ಬೆಂಕಿ’ ಹಾಡುಗಳು ಚೆನ್ನಾಗಿವೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಹಾಗೂ ಸಂತೋಷ್‌ ರೈ ಪಾತಾಜೆ ಛಾಯಾಚಿತ್ರಗ್ರಹಣ ‘ಗ್ರಾಮಾಯಣ’ಕ್ಕೆ ಜೀವ ತುಂಬಿದೆ. 

Leave a Reply

Your email address will not be published. Required fields are marked *